ಕಾಂಗ್ರೆಸ್, ಭಾರತ ರಾಷ್ಟ್ರೀಯ

 ಭಾರತದ ಸ್ವಾತಂತ್ರ್ಯಕ್ಕಾಗಿ ಹೊರಾಡಿದ ಅತ್ಯಂತ ದೊಡ್ಡ ರಾಜಕೀಯ ಸಂಸ್ಥೆ. 1885ರ ಡಿಸೆಂಬರ್ 28ರಂದು ಸ್ಥಾಪಿತವಾಯಿತು. ಇದರ ಪ್ರಥಮ ಅಧಿವೇಶನ ನಡೆದದ್ದು ಬೊಂಬಾಯಿಯಲ್ಲಿ (1885). ಕಲ್ಕತ್ತ ಉಚ್ಚ ನ್ಯಾಯಾಲಯದ ಉನ್ನತ ವಕೀಲರಾಗಿದ್ದ ಡಬ್ಲ್ಯು. ಸಿ. ಬಾನರ್ಜಿ ಪ್ರಥಮಾಧಿವೇಶನದ ಅಧ್ಯಕ್ಷರು. ಭಾರತದಲ್ಲಿ ಬ್ರಿಟಿಷ್ ಆಡಳಿತವನ್ನು ಕೊನೆಗೊಳಿಸಲು ಮಹತ್ತಮ ಪಾತ್ರವಹಿಸಿದ ಈ ಸಂಸ್ಥೆಯ ಸ್ಥಾಪನೆಗೆ ಆಗ ಭಾರತದ ವೈಸ್‍ರಾಯಿಯಾಗಿದ್ದ ಲಾರ್ಡ್ ಡಫರಿನನಿಂದಲೇ (1884-1888) ಪರೋಕ್ಷವಾಗಿ ಪ್ರೋತ್ಸಾಹ ದೊರಕಿತ್ತು. ನಿವೃತ್ತ ಇಂಗ್ಲಿಷ್ ಅಧಿಕಾರಿ ಆಲೆನ್ ಆಕ್ಟೇವಿಯನ್ ಹ್ಯೂಂ ಇದರ ಸ್ಥಾಪನೆಗೆ ಬಹಳಮಟ್ಟಿಗೆ ಕಾರಣ.

 ನಿಶ್ಚಿತ ರಾಜಕೀಯೋದ್ದೇಶಗಳಿಗಾಗಿ ರಾಷ್ಟ್ರೀಯ ಸಂಸ್ಥೆಯೊಂದನ್ನು ಸಂಘಟಿಸುವ ಆವಶ್ಯಕತೆಯನ್ನು ಮನಗಂಡವರೂ ಅದಕ್ಕಾಗಿ ಶ್ರಮಿಸಿದವರೂ ಅನೇಕ ಜನ. ಭಾರತದಲ್ಲಿ ಬ್ರಿಟಿಷ್ ಆಡಳಿತ ಸ್ಥಿರವಾಗುತ್ತಿದ್ದಂತೆಯೇ ನವೋದಯ ಭಾವನೆಗಳೂ ಕ್ಷಿಪ್ರವಾಗಿ ಪ್ರಚುರವಾಗಿ ಇವು ರಾಷ್ಟ್ರಪ್ರಜ್ಞೆಯ ಉಗಮಕ್ಕೆ ಪ್ರೇರಕ ಶಕ್ತಿಗಳಾಗಿ ಪರಿಣಮಿಸಿದುವು. ಅಂತಿಮವಾಗಿ ಭಾರತ ರಾಷ್ಟ್ರೀಯ ಕಾಂಗ್ರೆಸಿನ ಜನ್ಮವಾಯಿತು. ಭಾರತದ ಅಖಂಡತಾದೃಷ್ಟಿ ಮತ್ತು ಸ್ವರಾಜ್ಯದ ಹಕ್ಕಿನ ತತ್ತ್ವಗಳ ಮೇಲೆ ರಾಷ್ಟ್ರೀಯ ಜಾಗೃತಿ ವಿಕಾಸಗೊಳ್ಳುವುದಕ್ಕೆ ಅನೇಕ ಅಂಶಗಳು ನೆರವಾದವು.

 ಅನೇಕ ರಾಷ್ಟೀಯ ಚಳವಳಿಗಳಂತೆ ಭಾರತದ ರಾಜಕೀಯ ಜನ ಜಾಗೃತಿಗೂ ಬೌದ್ಧಿಕ ಹಿನ್ನೆಲೆಯೊಂದಿತ್ತು. ಇಂಗ್ಲಿಷ್ ಶಿಕ್ಷಣದ ಫಲವಾಗಿ ಭಾರತದ ಮಧ್ಯಮ ವರ್ಗದ ಜನರಲ್ಲಿ ಅಭೂತಪೂರ್ವವಾದ ಜಾಗೃತಿಯುಂಟಾಗಿತ್ತು. ಇಂಗ್ಲಿಷ್ ಸಾಹಿತ್ಯ ಇತಿಹಾಸಗಳಲ್ಲಿ ಕಂಡುಬಂದಿದ್ದ ಉದಾರವಾದಿ ಭಾವನೆಗಳಿಗೆ ಭಾರತದ ಈ ಜನ ಮಾರು ಹೋಗಿದ್ದರು. ಬ್ರಿಟಿಷ್ ನ್ಯಾಯದೃಷ್ಟಿಯಲ್ಲಿ ಇವರಿಗೆ ಅಪಾರ ನಂಬುಗೆಯಿತ್ತು. ಬ್ರಿಟನಿನಲ್ಲಿದ್ದ ಉದಾರವಾದಿ ನಾಯಕತ್ವದಿಂದ ಮೊದಮೊದಲು ಭಾರತೀಯರ ಈ ತೆರನಾದ ಭಾವನೆಗಳಿಗೆ ಪ್ರೋತ್ಸಾಹವೂ ಸಿಕ್ಕಿತ್ತು. ಬ್ರಿಟಿಷ್ ಸರ್ಕಾರದ ನೀತಿ ನಿರೂಪಣೆಯಲ್ಲಿ ಈ ಅಂಶ ಪ್ರಧಾನವಾಗಿ ಎದ್ದು ಕಾಣುತ್ತಿತ್ತು. ಭಾರತೀಯ ಪ್ರಜೆಗಳ ಹಿತಸಾಧನೆಯೇ ಬ್ರಿಟನಿನ ಕರ್ತವ್ಯವೆಂಬುದು 1813ರ ಸನ್ನದು ಕಾಯಿದೆಯಲ್ಲಿ (ಚಾರ್ಟರ್ ಆಕ್ಟ್) ಕಂಡುಬಂದಿದ್ದ ಒಕ್ಕಣೆ. 1833ರ ಸಂಸದೀಯ ಸಮಿತಿ ವ್ಯಕ್ತಪಡಿಸಿದ್ದಾದರೂ ಇದೇ ಆಶಯವನ್ನೇ. ತನ್ನ ಸರ್ಕಾರದ ದೃಷ್ಟಿಯಲ್ಲಿ ಭಾರತದ ದೇಶೀಯ ಪ್ರಜೆಗಳಿಗೂ ಬ್ರಿಟಿಷ್ ಪ್ರಜೆಗಳಿಗೂ ಯಾವ ವ್ಯತ್ಯಾಸವೂ ಇಲ್ಲವೆಂದೇ ಬ್ರಿಟಿಷ್ ರಾಣಿ ಹೊರಡಿಸಿದ ಘೋಷಣೆಯಲ್ಲೂ (1858) ಹೇಳಲಾಗಿತ್ತು. ಇದನ್ನೆಲ್ಲ ಭಾರತೀಯ ಮಧ್ಯಮವರ್ಗದ ಬುದ್ಧಿಜೀವಿಗಳು ಮನಸಾರ ನಂಬಿದ್ದರು.

 ಆದರೆ ಬಹುಬೇಗ ಅವರಿಗೆ ಭ್ರಮನಿರಸನಕಾದಿತ್ತು. ಭಾರತದ ಲೋಕಸೇವಾ ಅಧಿಕಾರಿ ವರ್ಗಕ್ಕೆ ಭಾರತೀಯನ್ನು ನೇಮಿಸಿಕೊಳ್ಳುವ ವಿಚಾರದಲ್ಲಿ ಸರ್ಕಾರ ಅನುಸರಿಸಿದ ಧೋರಣೆಯೇ ಮೊದಲ ಆಘಾತ. ಭಾರತೀಯ ಪ್ರಜೆಯಾದ ಸುರೇಂದ್ರನಾಥ ಬ್ಯಾನರ್ಜಿ ಆ ಸಂಬಂಧವಾದ ಸ್ಪರ್ಧಾ ಪರೀಕ್ಷೆಯಲ್ಲಿ ಜಯಶಾಲಿಯಾಗಿದ್ದರೂ ಅವರ ಹೆಸರನ್ನು ಪಟ್ಟಿಯಿಂದ ಕಿತ್ತುಹಾಕಲು ಪ್ರಯತ್ನ ನಡೆಯಿತು. ಕೊನೆಗೆ ರಾಣಿಯ ನ್ಯಾಯ ಪೀಠದಿಂದ (ಕ್ವೀನ್ಸ್ ಬೆಂಚ್) ಬಂದ ಆಜ್ಞೆಯಿಂದಾಗಿ ಬ್ಯಾನರ್ಜಿಯನ್ನು ನೇಮಿಸಿಕೊಳ್ಳಲಾಯಿತಾದರೂ ಯಾವುದೋ ಕುಂಟು ನೆವದಿಂದ ಅವರನ್ನು ಸ್ವಲ್ಪ ಕಾಲಾನಂತರ ವಜಾ ಮಾಡಲಾಯಿತು.

 ಹೀಗೆ ಬ್ರಿಟಿಷ್ ಸರ್ಕಾರಕ್ಕೆ ಸೇವೆ ಸಲ್ಲಿಸಲು ನಿರಾಕೃತರಾದ ವ್ಯಕ್ತಿಯೇ ಮುಂದೆ ರಾಷ್ಟೀಯ ಚಳವಳಿಯ ನಾಯಕರಾದರು. ಅವರಿಂದ ಕಲ್ಕತ್ತದ ಭಾರತೀಯ ಸಂಘದ ಸ್ಥಾಪನೆಯಾಯಿತು. ಮ್ಯಾಟ್ಜಿನಿಯಿಂದ ಸ್ಫೂರ್ತಿಗೊಂಡು ಅಖಿಲ ಭಾರತದ ವ್ಯಾಪ್ತಿಯುಳ್ಳ ಚಳವಳಿ ನಡಸುವುದು ಅದರ ಉದ್ದೇಶ. ಲೋಕಸೇವೆ, ಅಸ್ತ್ರಕಾಯಿದೆ, ದೇಶೀಯ ಪತ್ರಿಕಾ ಕಾಯಿದೆ ಮುಂತಾದ ನಾನಾ ವಿಚಾರಗಳಲ್ಲಿ ಸರ್ಕಾರ ತಳೆದ ಧೋರಣೆಯನ್ನು ಪ್ರತಿಭಟಿಸಿ ಅಖಿಲ ಭಾರತದಲ್ಲಿ ಸಭೆಗಳು ನಡೆದುವು. ಐರೋಪ್ಯ, ಬ್ರಿಟಿಷ್ ಪ್ರಜೆಗಳನ್ನು ಭಾರತೀಯ ನ್ಯಾಯಾಧೀಶರು ವಿಚಾರಣೆ ನಡೆಸಬಾರದೆಂಬ ನಿಯಮವನ್ನು ರದ್ದು ಮಾಡಲು ತಂದ ವಿಧೇಯಕವೊಂದನ್ನು (ನೋಡಿ- ಇಲ್ಬರ್ಟ್-ವಿಧೇಯಕ) ವಿರೋಧಿಸಲು ಭಾರತದಲ್ಲಿದ್ದ ಐರೋಪ್ಯರು ಸಂಘಟಿತರಾದ ಬಗೆಯನ್ನು ಕಂಡು, ಸಂಘಟನೆಯೇ ಗೆಲವಿಗೆ ತಳಹದಿಯೆಂಬುದನ್ನು ಭಾರತೀಯರೂ ಅರಿತುಕೊಂಡರು. ಇದರ ಫಲವೇ ಕಲ್ಕತ್ತದಲ್ಲಿ ಸಮಾವೇಶಗೊಂಡ (1883) ಭಾರತ ರಾಷ್ಟ್ರೀಯ ಸಮ್ಮೇಳನ.

 ಭಾರತದ ಪ್ರಜೆಗಳ ಮಾನಸಿಕ ನೈತಿಕ ಸಾಮಾಜಿಕ ಮತ್ತು ರಾಜಕೀಯ ಪುನರುಜ್ಜೀವನಕ್ಕಾಗಿ ಕಲ್ಕತ್ತ ವಿಶ್ವವಿದ್ಯಾಲಯದ ಪದವೀಧರರು ಸುಸಂಘಟಿತರಾಗಬೇಕೆಂದು ಆಲೆನ್ ಆಕ್ಟೇವಿಯನ್ ಹ್ಯೂಂ ಆ ಯುವಕರಿಗೆ ಕರೆ ಕೊಟ್ಟದ್ದು ಅದೇ ವರ್ಷವೇ. ಭಾರತ ಸರ್ಕಾರಕ್ಕೆ ಸಾಮಾನ್ಯ ಜನರ ಅರಕೆಗಳನ್ನೂ ಆಶೋತ್ತರಗಳನ್ನೂ ಅರಿಕೆ ಮಾಡಿಕೊಳ್ಳಲು ಅಖಿಲ ಭಾರತ ಸಂಸ್ಥೆಯೊಂದು ಅಗತ್ಯವೆಂಬುದನ್ನು ಮನಗಂಡ ಹ್ಯೂಂ ಆ ವಿಚಾರವಾಗಿ ಸರ್ಕಾರದೊಂದಿಗೂ ಸಮಾಲೋಚನೆ ನಡಸಿದ. ಸರ್ಕಾರದಿಂದ ಉತ್ತೇಜಕ ಪ್ರತಿಕ್ರಿಯೆ ದೊರಕಿದ್ದರಿಂದ ಆತ ಮುಂದುವರಿದ. ಅನೇಕ ಪ್ರಮುಖ ಭಾರತೀಯರ ಸಹಕಾರ ದೊರಕಿತು. 1885ರ ಕ್ರಿಸ್‍ಮಸ್ ವಾರದಲ್ಲಿ ಮುಂಬಯಿಯಲ್ಲಿ ಭಾರತ ರಾಷ್ಟೀಯ ಕಾಂಗ್ರೆಸಿನ ಪ್ರಥಮಾಧಿವೇಶನ ನಡೆಯಿತು. ಕಲ್ಕತ್ತದಲ್ಲಿ ಭಾರತ ರಾಷ್ಟ್ರೀಯ ಸಮ್ಮೇಳನದ ದ್ವಿತೀಯಾಧಿವೇಶನ ನಡೆದದ್ದೂ ಅದೇ ಸಮಯದಲ್ಲೆ. ರಾಷ್ಟ್ರದಲ್ಲಿ ಜಾಗೃತಿ ಸಾಧಿಸುವ ಉದ್ದೇಶದಿಂದ ಅಖಿಲ ಭಾರತದಲ್ಲಿ ಏಕೈಕ ಸಂಸ್ಥೆಯಿರಬೇಕೆಂಬ ಉದ್ದೇಶದಿಂದ ಭಾರತ ರಾಷ್ಟೀಯ ಕಾಂಗ್ರೆಸಿನಲ್ಲಿ ಭಾರತ ರಾಷ್ಟೀಯ ಸಮ್ಮೇಳನ ವಿಲೀನವಾಯಿತು.

 ಭಾರತ ರಾಷ್ಟ್ರೀಯ ಕಾಂಗ್ರೆಸಿನ ಪ್ರಥಮ ಅಧಿವೇಶನದಲ್ಲಿ ಭಾಗವಹಿಸಿದ ಪ್ರತಿನಿಧಿಗಳ ಸಂಖ್ಯೆ ಕೇವಲ 71. ಅಂದಿನಿಂದ ವರ್ಷವರ್ಷವೂ ಕ್ರಿಸ್‍ಮಸ್ ಸಮಯದಲ್ಲಿ ಅದರ ಅಧಿವೇಶನ ಒಂದೊಂದು ನಗರದಲ್ಲಿ ಸೇರುತ್ತಿತ್ತು. ಅಧಿವೇಶನ ನಡೆಯುತ್ತಿದ್ದಲ್ಲೆಲ್ಲ ಸ್ಥಳೀಯ ಜನ ಅತೀವ ಉತ್ಸಾಹ ತಳೆಯುತ್ತಿದ್ದರು. ಕ್ರಮೇಣ ಅಖಿಲ ಭಾರತದ ಪ್ರತಿನಿಧಿಗಳ ಸಂಖ್ಯೆಯೂ ಅಧಿಕಗೊಂಡಿತು. ರಾಷ್ಟ್ರಕಾರಣಕ್ಕಾಗಿ ಶ್ರಮಿಸುವ ಎಲ್ಲ ನಿಷ್ಠಾವಂತರೂ ಪರಸ್ಪರವಾಗಿ ಅರಿತುಕೊಳ್ಳಬೇಕು. ಬರಲಿರುವ ವರ್ಷದಲ್ಲಿ ಅನುಸರಿಸುವ ಕಾರ್ಯ ಕ್ರಮವನ್ನು ನಿರ್ಧರಿಸಿಕೊಳ್ಳಬೇಕು. ಈ ಸಮ್ಮೇಳನದಲ್ಲೇ ದೇಶೀಯ ಸಂಸತ್ತಿನ ಅಂಕುರಾರ್ಪಣವಾಗಬೇಕು. ಇದನ್ನು ಸರಿಯಾಗಿ ನಿರ್ವಹಿಸಿದರೆ ಯಾವುದೇ ಬಗೆಯ ಪ್ರಾತಿನಿಧಿಕ ಸಂಸ್ಥೆಗಳಿಗೆ ಭಾರತ ಅನರ್ಹವೆಂಬ ಸವಾಲಿಗೆ ಇದು ಜವಾಬೂ ಆಗಬಹುದು_ಎಂದು ಪ್ರಥಮಾಧಿವೇಶನದ ಪ್ರಣಾಳಿಕೆಯಲ್ಲಿ ಹ್ಯೂಂ ಹೇಳಿದ ಮಾತು ಸಾರ್ಥಕವಾಯಿತು.

 19ನೆಯ ಶತಮಾನದ ಪೂರ್ತಿ ಕಾಂಗ್ರೆಸು ಸರ್ಕಾರದ ನೀತಿಯನ್ನು ಟೀಕಿಸುವುದರಲ್ಲೂ ಸುಧಾರಣೆಯ ಬೇಡಿಕೆಗಳನ್ನು ಮುಂದಿಡುವುದರಲ್ಲೂ ನಿರತವಾಗಿತ್ತು. ಯಾವಾಗಲೂ ಅದು ತನ್ನ ಗಾಂಭೀರ್ಯವನ್ನಾಗಲಿ ಮಿತವಾದವನ್ನಾಗಲಿ ಬಿಟ್ಟು ಹೋಗಲಿಲ್ಲ. ಸ್ವಯಮಾಡಳಿತದ ಬೆಳೆವಣಿಗೆ, ಇಂಡಿಯ ಕೌನ್ಸಿಲಿನ ರದ್ದು, ಶಿಕ್ಷಣಾಭಿವೃದ್ಧಿ, ಸೈನ್ಯ ವೆಚ್ಚದಲ್ಲಿ ಕಡಿತ, ಕಾರ್ಯಾಂಗ ಶಾಸನಾಂಗಗಳ ಪ್ರತ್ಯೇಕತೆ, ಉನ್ನತ ಹುದ್ದೆಗಳಲ್ಲಿ ಭಾರತೀಯರ ನೇಮಕ_ಇವು ಅದರ ಕೆಲವು ಬೇಡಿಕೆಗಳು. ಯಾವುದೇ ಸಂದರ್ಭದಲ್ಲೂ ಅದು ಬ್ರಿಟಿಷ್ ರಾಜಕಾರಣಿಗಳ ಮುತ್ಸದ್ದಿತನದಲ್ಲಾಗಲಿ ನ್ಯಾಯ ದೃಷ್ಟಿಯಲ್ಲಾಗಲಿ ಔದಾರ್ಯದಲ್ಲಾಗಲಿ ನಂಬಿಕೆ ಕಳೆದುಕೊಳ್ಳಲಿಲ್ಲ. ರಾಜಭಕ್ತಿ ಪ್ರದರ್ಶನದಲ್ಲೂ ಅದು ಹಿಂದೆಗೆಯಲಿಲ್ಲ.

1896ರಲ್ಲಿ ಕಾಂಗ್ರೆಸು ಆರ್ಥಿಕ ಸಾಮಾಜಿಕ ದೃಷ್ಟಿಗಳನ್ನೂ ಕೂಡಿಸಿಕೊಂಡಿತು. ಭಾರತೀಯ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೈಗಾರಿಕಾ ಪ್ರದರ್ಶನವೊಂದನ್ನು ಏರ್ಪಡಿಸಿತು. ಸಮಾಜದ ಪೀಡೆಗಳನ್ನು ನಿವಾರಿಸುವ ಉದ್ದೇಶದಿಂದ ಸಾಮಾಜಿಕ ಸಮ್ಮೇಳನವೊಂದನ್ನು ವ್ಯವಸ್ಥೆಗೊಳಿಸಿದ್ದೂ ಅದೇ ವರ್ಷ.

 ಮೊದಮೊದಲು ಸರ್ಕಾರ ಕಾಂಗ್ರೆಸ್ ಚಳವಳಿಯ ಬಗ್ಗೆ ಪ್ರೋತ್ಸಾಹಕರ ನಿಲವನ್ನೇ ತಳೆದಿತ್ತು. ಅಸಹನೆಯಂತೂ ಇರಲೇ ಇಲ್ಲ. 1886ರಲ್ಲಿ ಕಲ್ಕತ್ತದ ಅಧಿವೇಶನಕ್ಕೆ ಬಂದಿದ್ದ ಕಾಂಗ್ರೆಸ್ ಸದಸ್ಯರನ್ನು ವನಭೋಜನವೊಂದಕ್ಕೆ ಕೂಡ ಆಗಿನ ಗವರ್ನರ್ ಜನರಲ್ ಲಾರ್ಡ್ ಡಫರಿನ್ ಕರೆದಿದ್ದ.

 ಆದರೆ ಕ್ರಮೇಣ ಈ ನಿಲವು ಬದಲಾಯಿತು. ತನ್ನ ಅಧಿಕಾರ ಬಿಟ್ಟುಕೊಡುವ ಮುನ್ನ ಲಾರ್ಡ್ ಡಫರಿನನೇ ಕಾಂಗ್ರೆಸಿನ ನೀತಿ ವಿಧಾನಗಳ ಬಗ್ಗೆ ಅತೃಪ್ತಿ ಸೂಚಿಸಿದ. ಈ ಸುದ್ದಿ ಸರ್ಕಾರಿ ಕಚೇರಿಗಳಲ್ಲೆಲ್ಲ ಹಬ್ಬಿತು. ಅಧಿಕಾರಿಗಳ ಧೋರಣೆ ಬಿಗಿಯಾಯಿತು. ಕಾಂಗ್ರೆಸೂ ಡಫರಿನ್ ಆಶಿಸಿದ ರೀತಿಯಲ್ಲೇ ಮುಂದುವರಿಯಲಿಲ್ಲ. ಭಾರತದ ಜನರ ಆಶೋತ್ತರಗಳಿಗೆ ರೂಪುಕೊಟ್ಟು ಹೋರಾಡಲು ಅದು ಮುಂದೆ ಬಂತು. ಕ್ರಮೇಣ ಅದರ ಶಕ್ತಿ ವರ್ಧಿಸಿತು. ಹ್ಯೂಂ ಮಾತ್ರ ಭಾರತ ಹಾಗೂ ಪರದೇಶಗಳಲ್ಲಿ (ವಿಶೇಷತಃ ಬ್ರಿಟನಿನಲ್ಲಿ) ಕಾಂಗ್ರೆಸಿನ ಏಳ್ಗೆಗಾಗಿ ಶ್ರಮಿಸಿದ. ಅವನ ಪರಿಶ್ರಮದ ಫಲವಾಗಿ ಬ್ರಿಟಿಷ್ ಪಾರ್ಲಿಮೆಂಟಿನ ಕೆಲಸದಸ್ಯರ ಸಹಾನುಭೂತಿಯನ್ನು ಗಳಿಸಲಾಯಿತು. 1893ರಲ್ಲಿ ಲಾಹೋರಿನಲ್ಲಿ ಸೇರಿದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಅಂದಿನ ಬ್ರಿಟಿಷ್ ಪಾರ್ಲಿಮೆಂಟಿನ ಸದಸ್ಯ ದಾದಾಭಾಯಿನವರೋಜಿ ವಹಿಸಿದ್ದರು.

 ಆವರೆಗೆ ಮಂದಗಾಮಿಗಳ ನೇತೃತ್ವದಲ್ಲಿ ಸಂಘಟಿತವಾಗಿದ್ದ ಕಾಂಗ್ರೆಸ್ ಸಂಸ್ಥೆ ಚಿಕ್ಕ ಪುಟ್ಟ ಸುಧಾರಣೆಗಳಿಗಾಗಿ ಸರಕಾರಕ್ಕೆ ಪ್ರಾರ್ಥನೆಗಳನ್ನು ಸಲ್ಲಿಸುತ್ತಿತ್ತು. ಆದರೆ ಅವಕ್ಕೆ ಸರ್ಕಾರ ಗಮನ ಕೊಡುತ್ತಿರಲಿಲ್ಲ. ಈ ಮಧ್ಯೆ ಹಿಂದೂ ಧರ್ಮಸುಧಾರಕರ ವಾಣಿ ಜನತೆಯನ್ನೆಚ್ಚರಿಸಿತು. ಕಾಂಗ್ರೆಸ್ ಸಂಸ್ಥೆ ಕೈಗೊಳ್ಳುತ್ತಿದ್ದ ಕಾರ್ಯದಲ್ಲಿ ಎಲ್ಲರೂ ಭಾಗಿಗಳಾದರು. ಇದರಿಂದ ಆವರೆಗೆ ಕೆಲವೇ ಸುಶಿಕ್ಷಿತರ ಸಂಘಟನೆಯಾಗಿದ್ದ ಕಾಂಗ್ರೆಸ್ ಸಂಸ್ಥೆ ರಾಷ್ಟ್ರೀಯ ಸಂಸ್ಥೆಯಾಗಿ ಮಾರ್ಪಟ್ಟಿತು.

 ಬಂಗಾಳ ವಿಭಜನೆ: ಇಂಥ ಪರಿಸ್ಥಿತಿಯಲ್ಲಿ ಬ್ರಿಟಿಷರು ಭಾರತದಲ್ಲಿ ಒಡಕು ಹುಟ್ಟಿಸಲು ಪ್ರಯತ್ನಿಸಿದರು. ನಾಡಿನಲ್ಲಿ ಬೆಳೆಯುತ್ತಿದ್ದ ಏಕತೆಗೆ ಧಕ್ಕೆ ತರಲು ಮಾರ್ಗ ಹುಡುಕಿದರು. ಆ ವಿಚಾರದ ಫಲವಾಗಿಯೇ ಬಂಗಾಳ ವಿಭಜನೆಯ ಯೋಚನೆ ಬ್ರಿಟಿಷರಲ್ಲಿ ಬಂದದ್ದು.

 ಬಂಗಾಳ ವಿಭಜನೆಯಿಂದ ಕಾಂಗ್ರೆಸಿನ ದೃಷ್ಟಿ ಧೋರಣೆಗಳಲ್ಲೂ ಬದಲಾವಣೆಯುಂಟಾಯಿತು. ಆವರೆಗೆ ಶಾಂತಿ ಸಹಕಾರಗಳಿಗೆ ಹೆಚ್ಚಿನ ಮಹತ್ತ್ವ ನೀಡಿದ್ದ ಕಾಂಗ್ರೆಸಿನ ಮಂದಗಾಮಿಗಳ ಪಾತ್ರ ಹಿರಿಯದಾಗಿತ್ತು. ಆದರೆ ಮುಂದೆ, ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ನಾನು ಅದನ್ನು ಪಡೆದೇ ತೀರುತ್ತೇನೆ ಎಂಬ ಘೋಷಣೆಯೊಂದಿಗೆ ಲೋಕಮಾನ್ಯ ತಿಲಕರು ಕಾಂಗ್ರೆಸ್ಸಿನಲ್ಲಿ ಮಹತ್ತ್ವದ ಪಾತ್ರ ವಹಿಸಿದರು. ತಿಲಕರು ಮಂದಗಾಮಿಗಳ ಧೋರಣೆಯನ್ನು ಕಟುವಾಗಿ ಟೀಕಿಸಿದ್ದಲ್ಲದೆ, ಪರದೇಶೀ ಬಹಿಷ್ಕಾರವೊಂದೇ ಕಾಂಗ್ರೆಸಿಗೆ ಉಳಿದ ಮಾರ್ಗವೆಂದು ಘೋಷಿಸಿದರು.

 ಲೋಕಮಾನ್ಯ ತಿಲಕರ ನೇತೃತ್ವದಲ್ಲಿ ಕಾಂಗ್ರೆಸ್ ಸ್ವದೇಶಿಯ ಪರವಾಗಿಯೂ ಬಂಗಾಳ ವಿಭಜನೆಯ ವಿರುದ್ಧವಾಗಿಯೂ ಚಳವಳಿಗಳನ್ನು ಸಂಘಟಿಸಿತು. ಈ ಚಟುವಟಿಕೆಗಳೆಲ್ಲ ನ್ಯಾಯಬದ್ಧವಾದವೆಂದು 1906ರಲ್ಲಿ ಕಾಂಗ್ರೆಸ್ ಸಂಸ್ಥೆ ಗೊತ್ತುವಳಿಯೊಂದನ್ನು ಸ್ವೀಕರಿಸಿತು.

 ಬಂಗಾಳ ವಿಭಜನೆ ಬ್ರಿಟಿಷರು ಭಾರತದಲ್ಲಿ ಅನುಸರಿಸುತ್ತಿದ್ದ 'ಒಡೆದು ಆಳುವ ಧೋರಣೆ'ಯ ಒಂದು ನಿದರ್ಶನ. ಇದರಿಂದ ಹಿಂದೂ ಮುಸ್ಲಿಂ ಏಕತೆಯನ್ನು ನಾಶಪಡಿಸಿ, ತಮ್ಮ ಸಮ್ರಾಜ್ಯವನ್ನು ಶಾಶ್ವತಗೊಳಿಸಲು ಅವರು ಪ್ರಯತ್ನಿಸಿದರು ಎಂದು ಹೇಳಬಹುದು.

 ಬಂಗಾಳದಲ್ಲೆಲ್ಲ ಚಳವಳಿ, ಹರತಾಳಗಳ ಪ್ರತಿಭಟನೆಯ ವಾತಾವರಣ ಹರಡಿತು. ಭಾರತದ ಎಲ್ಲ ಪ್ರಾಂತ್ಯಗಳಿಗೂ ಹಬ್ಬಿತು. ಇದರೊಂದಿಗೆ ರಾಷ್ಟ್ರೀಯತಾ ಪ್ರಜ್ಞೆಯೂ ಬೆಳೆಯಿತು. ಲೋಕಮಾನ್ಯ ತಿಲಕ್, ಸುರೇಂದ್ರನಾಥ್ ಬ್ಯಾನರ್ಜಿ ಮುಂತಾದ ಕಾಂಗ್ರೆಸ್ ಮುಖಂಡರ ನೇತೃತ್ವದಲ್ಲಿ 1905 ರಿಂದ 1908ರ ವರೆಗೆ ಬಂಗಾಳ ವಿಭಜನೆಯನ್ನು ವಿರೋಧಿಸುವ ಉಗ್ರ ಆಂದೋಲನವೆದ್ದಿತು. ಕಾಂಗ್ರೆಸ್ ಸಂಸ್ಥೆ ಜನಪ್ರಿಯತೆಗಳಿಸಿ ರಾಷ್ಟ್ರೀಯ ಸಂಸ್ಥೆಯಾಯಿತು. ಈ ಕ್ಷೋಭೆಯನ್ನು ತಡೆಹಿಡಿಯಲು ಬ್ರಿಟಿಷರು 1909ರಲ್ಲಿ ಮಾರ್ಲೆ-ಮಿಂಟೋ ಸುಧಾರಣೆಗಳನ್ನು ನೀಡಿದರು. ಆದರೆ ಈ ಸುಧಾರಣೆಯಲ್ಲೇ ಪಾಕಿಸ್ತಾನದ ಬೀಜಾವಾಪನೆಯಾಗಿತ್ತು. ಇದರಲ್ಲಿ ಮುಸಲ್ಮಾನರಿಗೆ ಪ್ರತ್ಯೇಕ ಚುನಾವಣಾ ಸೌಲಭ್ಯವನ್ನು ಕೊಡಲಾಗಿತ್ತು. ಇದರ ಪರಿಣಾಮವಾಗಿ, ದೇಶದಲ್ಲಿ ತೃಪ್ತಿಗಿಂತ ಅತೃಪ್ತಿಯೇ ಹೆಚ್ಚಿತು. 1907ರಲ್ಲಿ ಸೂರತಿನಲ್ಲಿ ಸೇರಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಮುಂದಾಳುಗಳಲ್ಲಿ ಭಿನ್ನಾಭಿಪ್ರಾಯಗಳು ತೀವ್ರವಾಗಿದ್ದುವು. ಸಂಸ್ಥೆಯ ಚಟುವಟಿಕೆಗಳು ಅಷ್ಟೊಂದು ಸುಗಮವಾಗಿರಲಿಲ್ಲ.

 ಅಸಹಕಾರ, ಕಾನೂನು ಭಂಗ: ಒಂದನೆಯ ಮಹಾಯುದ್ಧದಲ್ಲಿ ಕಾಂಗ್ರೆಸ್ ಬ್ರಿಟಿಷರಿಗೆ ಬೆಂಬಲ ನೀಡಿತು. ಅದರ ಪ್ರತಿಫಲವಾಗಿ ಮತ್ತು ಅಸಂತುಷ್ಟ ಭಾರತೀಯರನ್ನು ತೃಪ್ತಿಪಡಿಸಲೆಂದು ಬ್ರಿಟಿಷ್ ಪಾರ್ಲಿಮೆಂಟ್ 1919ರಲ್ಲಿ ಸುಧಾರಣಾ ಕಾಯಿದೆಯೊಂದನ್ನು ಭಾರತಕ್ಕೆ ನೀಡಿತು. ಈ ಕಾಯಿದೆ ನಾಡಿನ ಜನರನ್ನು ಮತ್ತು ಕಾಂಗ್ರೆಸಿಗರನ್ನು ತೃಪ್ತಿಪಡಿಸಲಿಲ್ಲ. ಆಳರಸರ ಸಾಮ್ರಾಜ್ಯಷಾಹಿ ಯುದ್ಧಕ್ಕೆ ತಮ್ಮ ನೈತಿಕ ಹಾಗೂ ಭೌತಿಕ ಸಹಾಯ ನೀಡಿದ ಜನತೆಯ ಆಶೆಯನ್ನು ಈ ಸುಧಾರಣೆಯ ಕಾಯಿದೆ ಈಡೇರಿಸಲಿಲ್ಲ. ಜನ ಇದರ ವಿರುದ್ಧವಾಗಿ ಕಾಂಗ್ರೆಸಿನ ನೇತೃತ್ವದಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದರು.

 ಆ ವೇಳೆಗೆ ಕಾಂಗ್ರೆಸಿನ ಚಾಲಕರಲ್ಲಿ ಗಾಂಧೀಜಿ ಹಿರಿಯಸ್ಥಾನ ದೊರಕಿಸಿಕೊಂಡಿದ್ದರು. ದಕ್ಷಿಣ ಆಫ್ರಿಕದಂತೆ ಭಾರತದಲ್ಲೂ ಅಸಹಕಾರ ಮತ್ತು ಕಾನೂನು ಭಂಗ ಚಳವಳಿಗೆ ಸರಿಯಾದ ವಾತಾವರಣವಿದೆ ಎಂಬುದನ್ನರಿತ ಗಾಂಧೀಜಿ ಕಾಂಗ್ರೆಸಿನ ಆಶ್ರಯದಲ್ಲಿ ಅಸಹಕಾರ ಚಳವಳಿ ಪ್ರಾರಂಭಿಸಿದರು.

 ಅಸಹಕಾರ ಚಳವಳಿಯ ಗೊತ್ತುವಳಿಯನ್ನು ಸ್ವೀಕರಿಸಲಾದದ್ದು 1920 ರಲ್ಲಿ, ಕಲ್ಕತ್ತದಲ್ಲಿ ಕರೆದ ಕಾಂಗ್ರೆಸ್ ವಿಶೇಷ ಅಧಿವೇಶನದಲ್ಲಿ. ಅದರ ಪ್ರಕಾರ ಶಾಸನಸಭೆ, ಶೈಕ್ಷಣಿಕ ಕ್ಷೇತ್ರ, ಕೋರ್ಟು, ಕಚೇರಿ ಮುಂತಾದವುಗಳಿಗೆ ಬಹಿಷ್ಕಾರ ಹಾಕಲಾಯಿತು. ಚಳವಳಿಯನ್ನು ಹತ್ತಿಕ್ಕಲು ಸರ್ಕಾರ ಕೈಕೊಂಡ ದಮನನೀತಿ ಜನತೆಯನ್ನು ರೊಚ್ಚಿಗೆಬ್ಬಿಸಿತು. ಇದಲ್ಲದೆ ಬ್ರಿಟಿಷರು ಒಂದನೆಯ ಮಹಾಯುದ್ಧದಲ್ಲಿ ತುರ್ಕಿಗೆ ಮಾಡಿದ ಅನ್ಯಾಯ ಭಾರತೀಯ ಮುಸಲ್ಮಾನರನ್ನು ಕೆರಳಿಸಿತ್ತು. ಹೀಗಾಗಿ ಭಾರತದ ಹಿಂದೂ ಮುಸ್ಲಿಮರು ಏಕತೆಯಿಂದ ಬ್ರಿಟಿಷರನ್ನು ಪ್ರತಿಭಟಿಸಿದರು.

 ಕಾಂಗ್ರೆಸ್ ಬ್ರಿಟಿಷ್ ಪ್ರಭುತ್ವವನ್ನು ಅಲುಗಾಡಿಸುವ ದೃಷ್ಟಿಯಿಂದ ಮುಸಲ್ಮಾನರಿಗೆ ಪ್ರಿಯವಾದ ಖಿಲಾಫತ್ ಚಳವಳಿಗೆ ಬೆಂಬಲ ನೀಡಿತು. ಇದರಿಂದ ಹಿಂದೂ ಮುಸ್ಲಿಂ ಐಕ್ಯವಾಯಿತಾಗಿ ಬ್ರಿಟಿಷರು ಅಂಜಿದರು. ಆದರೆ ಇದು ತಾತ್ಕಾಲಿಕ ಐಕ್ಯ. ಅನಂತರ 1921ರ ಅಧಿವೇಶನದಲ್ಲಿ ಅಸಹಕಾರದೊಡನೆ ಕಾನೂನು ಭಂಗ ಚಳವಳಿಯನ್ನು ಪ್ರಾರಂಭಿಸಬೇಕೆಂದು ನಿರ್ಣಯವೊಂದನ್ನು ಕಾಂಗ್ರೆಸ್ ಸ್ವೀಕರಿಸಿತು. ತಮ್ಮ ಪ್ರಭುತ್ವವನ್ನೇ ಪ್ರಶ್ನಿಸುವಂತಿದ್ದ ಈ ನಿರ್ಣಯವನ್ನು ಸರ್ಕಾರ ಸ್ವಾಗತಿಸಲಿಲ್ಲ. ಕಾಂಗ್ರೆಸಿನ ಮುಂದಾಳುಗಳಿಂದ ಸೆರೆಮನೆಗಳು ತುಂಬತೊಡಗಿದವು. ಆಂದೋಲನವನ್ನು ನಿಗ್ರಹಿಸಲು ಬ್ರಿಟಿಷರು ಕ್ರೂರ ನೀತಿಯನ್ನನುಸರಿಸಿದರು. ಇದಾವುದಕ್ಕೂ ಅಂಜದೆ ಕಾಂಗ್ರೆಸಿಗರು ತಮ್ಮ ಚಟುವಟಿಕೆಗಳನ್ನು ಮುಂದುವರಿಸಿದರು. 1924 ರಲ್ಲಿ ಕಾಂಗ್ರೆಸ್ ಅಧಿವೇಶನ ಬೆಳಗಾಂವಿಯಲ್ಲಿ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಸೇರಿತು. ಈ ಅಧಿವೇಶನದಲ್ಲಿ ಅಸ್ಪøಶ್ಯತಾ ನಿವಾರಣೆ, ನಿರುದ್ಯೋಗ ಪರಿಹಾರ, ಪಾನನಿರೋಧ ಮುಂತಾದ ಮಹತ್ತ್ವದ ವಿಷಯಗಳ ಬಗ್ಗೆ ಗೊತ್ತುವಳಿಗಳನ್ನು ಸ್ವೀಕರಿಸಲಾಯಿತು.

 ತರುವಾಯ 1927ರಲ್ಲಿ ಬ್ರಿಟಿಷ್ ಸರ್ಕಾರ ಸೈಮನನ ನೇತೃತ್ವದಲ್ಲಿ ಒಂದು ಆಯೋಗ ನೇಮಿಸಿತು. ಭಾರತೀಯರ ಬೇಕು ಬೇಡುಗಳನ್ನು ವಿಚಾರಿಸಿ, ಭಾರತದ ರಾಜ್ಯಾಡಳಿತದಲ್ಲಿ ಕೈಕೊಳ್ಳಬೇಕಾದ ಬದಲಾವಣೆಯ ಬಗ್ಗೆ ಶಿಫಾರಸು ಮಾಡುವುದು ಈ ಆಯೋಗದ ಕಾರ್ಯ, ಯಾವ ಭಾರತೀಯನೂ ಇಲ್ಲದ ಆ ಆಯೋಗದ ಬಗ್ಗೆ ಸಂಶಯಪಟ್ಟು ಕಾಂಗ್ರೆಸ್ ಹಾಗೂ ಇನ್ನುಳಿದ ಸಂಸ್ಥೆಗಳು ಅದನ್ನು ಬಹಿಷ್ಕರಿಸಿದುವು.

 1928ರಲ್ಲಿ ಕಾಂಗ್ರೆಸು ಮೋತಿಲಾಲ್ ನೆಹರು ಹಾಗೂ ಇನ್ನುಳಿದ ಮುಖಂಡರ ನೇತೃತ್ವದಲ್ಲಿ ಭಾರತಕ್ಕೆ ಒಂದು ಹೊಸ ರಾಜ್ಯಘಟನೆ ನಿರ್ಮಿಸಿತು. ಇದು ಕಾಂಗ್ರೆಸ್ ಪಕ್ಷದ ರಚನಾತ್ಮಕ ಕಾರ್ಯನೀತಿಗೆ ಉತ್ತಮ ಉದಾಹರಣೆಯೆಂದು ಹಲವಾರು ಬ್ರಿಟಿಷ್ ರಾಜಕಾರಣಪಟುಗಳೇ ಅಭಿಪ್ರಾಯಪಟ್ಟಿದ್ದಾರೆ. ಆದರೆ ಆಗಿನ ಸರ್ಕಾರ ನೆಹರು ಸಮಿತಿಯ ಬೇಡಿಕೆ ಅತಿಯಾಯಿತೆಂಬಾಪಾದನೆ ಹೊರಿಸಿ ಅದನ್ನು ತಿರಸ್ಕರಿಸಿತು.

 ರಾಷ್ಟ್ರಧ್ವಜ, ರಾಷ್ಟ್ರಗೀತೆ: ಭಾರತ ಸ್ವತಂತ್ರವಾಗಲೇಬೇಕೆಂಬ ಬಲವಾದ ಬೇಡಿಕೆಯನ್ನು ಕಾಂಗ್ರೆಸ್ 1930ರಲ್ಲಿ ಮುಂದಿರಿಸಿತಲ್ಲದೆ, ಪ್ರತಿಯೊಂದು ರಾಷ್ಟ್ರಕ್ಕೂ ಒಂದು ಧ್ವಜ ಆವಶ್ಯಕವೆಂದು ಭಾವಿಸಿ ತನ್ನದೇ ರಾಷ್ಟ್ರಧ್ವಜವನ್ನು ಏರ್ಪಡಿಸಿಕೊಂಡಿತು. ಕಾಂಗ್ರೆಸಿನ ಚಟುವಟಿಕೆಗಳಿಗೆ ನಾಂದಿಯಾಗಿ ಧ್ವಜಾರೋಹಣ ವಂದನೆಗಳು ಜನಪ್ರಿಯ ಕಾರ್ಯಕ್ರಮಗಳಾದುವು. ಮುಖಂಡರು ರಾಷ್ಟ್ರಧ್ವಜದ ಮಹತ್ತ್ವದ ಬಗ್ಗೆ ಜನತೆಗೆ ತಿಳಿವಳಿಕೆ ಕೊಡುತ್ತಿದ್ದರು. ಅದನ್ನು ಕುರಿತು ಹಿಂದಿ ಮತ್ತು ಇತರ ದೇಶಭಾಷೆಗಳಲ್ಲಿ ಹಾಡುಗಳನ್ನು ಕೂಡ ರಚಿಸಲಾಯಿತು. ತ್ರಿವರ್ಣಗಳಿಂದ ಕೂಡಿದ ಧ್ವಜದ ಮಧ್ಯೆ ಚರಕದ ಚಿತ್ರವನ್ನು ಸೇರಿಸಿ, ಭಾರತದ ಆರ್ಥಿಕ ಅಭಿವೃದ್ಧಿಯಾಗಬೇಕಾದರೆ ಮನೆಮನೆಗೂ ನೂಲುವ ಕಾಯಕ ಪ್ರಸಾರವಾಗಬೇಕೆಂಬ ಸಂದೇಶವನ್ನು ರಾಷ್ಟ್ರೀಯ ಕಾಂಗ್ರೆಸ್ ಸಂಸ್ಥೆ ಸಾರಿತು. ರಾಷ್ಟ್ರಧ್ವಜವನ್ನು ಹಾರಿಸಲು ಸರ್ಕಾರ ಪ್ರತಿಬಂಧಿಸಿದಾಗ ಕಾಂಗ್ರೆಸ್ ಸಂಸ್ಥೆ ಧ್ವಜಸತ್ಯಾಗ್ರಹವನ್ನು ಕೂಡ ಕೈಕೊಂಡ ಪ್ರಸಂಗಗಳುಂಟು.

 ಕಾಂಗ್ರೆಸು ಜನತೆಯನ್ನು ಆಕರ್ಷಿಸಲು ಹಾಗೂ ಅವರಲ್ಲಿ ಏಕತೆ ಬೆಳೆಸಲು ಏರ್ಪಡಿಸಿದ ಇನ್ನೊಂದು ಸಾಂಕೇತಿಕ ಅಂಶವೆಂದರೆ ರಾಷ್ಟ್ರಗೀತೆ. ಬಂಕಿಂ ಚಂದ್ರ ವಿರಚಿತ ವಂದೇ ಮಾತರಂ ಗೀತೆಯನ್ನು ಕಾಂಗ್ರೆಸ್ ಸಂಸ್ಥೆ ರಾಷ್ಟ್ರಗೀತೆಯೆಂದು ಅಂಗೀಕರಿಸಿತು. ಇದರ ಜೊತೆಗೆ ರಮೀಂದ್ರನಾಥ ಠಾಕೂರರ ಜನಗಣಮನ ಗೀತೆಯೂ ಜನಪ್ರಿಯವಾಯಿತು. ವಂದೇ ಮಾತರಂ ಗೀತೆ ನಾಡಿನ ಮನೆಮನೆಗೂ ಮುಟ್ಟಿ ರಾಷ್ಟ್ರೀಯತ್ವದ ಸಂದೇಶ ಸಾರಿತು.

 ಭಾವೈಕ್ಯದ ಈ ಕ್ರಮಗಳನ್ನು ಬ್ರಿಟಿಷ್ ಸರ್ಕಾರ ನಿರೀಕ್ಷಿಸಿರಲಿಲ್ಲ. ಹೇಗಾದರೂ ಭಾರತೀಯರಲ್ಲಿ ಒಡಕು ಹುಟ್ಟಿಸಬೇಕೆಂಬುದು ಅದರ ಆಗಿನ ನಿರ್ಧಾರ. ಬ್ರಿಟಿಷರ ಈ ಧೋರಣೆ ಪ್ರಕಟವಾದದ್ದು ಅವರು ಕರೆದ ದುಂಡುಮೇಜಿನ ಪರಿಷತ್ತಿನಲ್ಲಿ (1930-32). ಭಾರತ ಮತ್ತು ಬ್ರಿಟಿಷ್ ಪ್ರತಿನಿಧಿಗಳ ಆ ಸಭೆಗಳಿಂದ ಯಾವ ಪ್ರಯೋಜನವೂ ಆಗಲಿಲ್ಲ. ಬ್ರಿಟಿಷ್ ಸರ್ಕಾರ ಹೊತ್ತಿಸಿದ ಜಾತೀಯತೆಯ ಬೆಂಕಿ ಮಾತ್ರ ಅಪಾಯಕಾರಿಯಾಗಿ ಪರಿಣಮಿಸಿತು.

 ದೇಶದಲ್ಲಿ ಅನೇಕ ಗಲಭೆಗಳಾದುವು. ಕೊಲೆಸುಲಿಗೆಗಳು ನಡೆದುವು. ನೂರಾರು ಭಾರತೀಯರು ಗುಂಡಿನೇಟಿಗೆ ತುತ್ತಾದರು. ಪರಕೀಯ ಸರ್ಕಾರ ಎಂಥ ಕಠಿಣ ಕ್ರಮಗಳನ್ನು ಕೈಕೊಂಡರೂ ಕಾಂಗ್ರೆಸಿನ ಚಳವಳಿ ನಿಲ್ಲಲಿಲ್ಲ. ಆದ್ದರಿಂದ ಬ್ರಿಟಿಷ್ ಸರ್ಕಾರ 1933ರಲ್ಲಿ ಶ್ವೇತಪತ್ರವೊಂದನ್ನು ಹೊರಡಿಸಿ ಭಾರತದ ಭಾವೀ ಆಡಳಿತದಲ್ಲಿ ಮಹತ್ತರವಾದ ಸುಧಾರಣೆ ಮಾಡುವ ಇಚ್ಛೆಯನ್ನು ಪ್ರಕಟಪಡಿಸಿತು. ಆಮೇಲೆ 1934ರಲ್ಲಿ ಕಾಂಗ್ರೆಸ್ ಸಂಸ್ಥೆಯೇ ಈ ಅಸಹಕಾರ ಹಾಗೂ ಕಾನೂನು ಭಂಗ ಚಳವಳಿಗಳನ್ನು ಹಿಂತೆಗೆದುಕೊಂಡಿತು. ದೇಶದಲ್ಲಿ ಶಾಂತಿ ಸುವ್ಯವಸ್ಥೆಗಳು ಕಾಣಿಸಿಕೊಂಡುವು.

 ಪ್ರಾಂತೀಯ ಸ್ವಯಮಾಡಳಿತ: 1935ರ ಕಾಯಿದೆ ಪ್ರಾಂತ್ಯಗಳಿಗೆ ಸ್ವಯಮಧಿಕಾರ ಕೊಟ್ಟಿತು. ಆದರೆ ಈ ಪ್ರಾಂತೀಯ ಸ್ವಾಯತ್ತೆ ಹಲವಾರು ಪರಿಮಿತಿಗಳಿಗೊಳಗಾಗಿತ್ತು. ಗವರ್ನರ್ ಅನೇಕ ವಿಚಾರಗಳಲ್ಲಿ ನಿರಂಕುಶ ಅಧಿಕಾರ ಪಡೆದಿದ್ದ. ಹೀಗಿರುವಾಗ ಅಧಿಕಾರ ಸ್ವೀಕರಿಸಿದರೆ ಹಗ್ಗಕೊಟ್ಟು ಕೈ ಕಟ್ಟಿಸಿಕೊಂಡಂತೆ ಎಂದು ಕಾಂಗ್ರೆಸ್ ಬಗೆದು, ಮಂತ್ರಿಮಂಡಲಗಳನ್ನು ರಚಿಸಲು ಹಿಂಜರಿಯಿತು. ಈ ಬಿಕ್ಕಟ್ಟು ಬಹಳ ದಿನಗಳ ವರೆಗೆ ಸಾಗಿ ಸರ್ಕಾರರಚನೆ ಹಾಗೆಯೇ ಉಳಿಯಿತು. ಕೊನೆಗೆ ವೈಸ್ ರಾಯಿಯ ಪ್ರಾರ್ಥನೆಯಂತೆ ಕಾಂಗ್ರೆಸ್ ಇದಕ್ಕೆ ಒಡಂಬಟ್ಟಿತು. ಸುಧಾರಣಾ ಕಾಯಿದೆಗನುಗುಣವಾಗಿ, ಚುನಾವಣೆಗಳು ನಡೆದುವು. ಸಿಂಧ್ ಪ್ರಾಂತ್ಯವೂ ಸೇರಿ ಒಟ್ಟು ಎಂಟು ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಪ್ರಚಂಡ ಬಹುಮತ ಗಳಿಸಿ ಆರಿಸಿ ಬಂತು.

 ಆದರೆ ಸರ್ಕಾರದ ರಚನೆಗೆ ಅಡ್ಡಿಯಾದ ಇನ್ನೊಂದು ಅಂಶವೆಂದರೆ ಮುಸ್ಲಿಂ ಲೀಗು. ಪ್ರತಿಯೊಂದು ಪ್ರಾಂತ್ಯದಲ್ಲೂ ಸಂಮಿಶ್ರ ಸರ್ಕಾರವಿರಬೇಕೆಂಬ ಬೇಡಿಕೆಯೊಂದನ್ನು ಅದು ಸರ್ಕಾರದ ಮುಂದಿರಿಸಿತು. ಆ ನಿರ್ಣಯಕ್ಕೆ ಕಾಂಗ್ರೆಸ್ ಹಾಗೂ ಸರ್ಕಾರ ಒಪ್ಪಲಿಲ್ಲ.

 ಗವರ್ನರರ ಅಧಿಕಾರಗಳ ಬಗ್ಗೆ ಸರ್ಕಾರದಿಂದ ನಿರ್ದಿಷ್ಟ ಭರವಸೆಗಳನ್ನು ಪಡೆದ ಮೇಲೆ ಪ್ರಾಂತ್ಯಗಳಲ್ಲಿ ಮುಂತ್ರಿಮಂಡಲ ರಚಿಸಲು ಕಾಂಗ್ರೆಸ್ ಒಪ್ಪಿಕೊಂಡಿತು. ಸಿಂಧನ್ನೂ ಒಳಗೊಂಡು ಒಟ್ಟು 8 ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಸರ್ಕಾರಗಳು ಸ್ಥಾಪಿತವಾದುವು (1937).

 ಮಂತ್ರಿಮಂಡಲಗಳ ಕಾರ್ಯಕ್ರಮಗಳಿಗೆ ಮೇಲಿಂದ ಮೇಲೆ ಆತಂಕ ಒಡ್ಡಲು ಗವರ್ನರರಿಗೆ ಧೈರ್ಯವಿರದಿದ್ದರೂ ಎಷ್ಟೋ ಮುಖ್ಯ ಸಂದರ್ಭಗಳಲ್ಲಿ ಅವರು ಮಂತ್ರಿಗಳ ಸಲಹೆಗಳನ್ನು ತಳ್ಳಿಹಾಕುತ್ತಿದ್ದರು. ಆದರೂ ಪ್ರಾಂತ್ಯಗಳ ಜನರ ಮೇಲೈಗಾಗಿ ಕಾಂಗ್ರೆಸ್ ಸರ್ಕಾರ ಅನೇಕ ರಚನಾತ್ಮಕ ಕಾರ್ಯಕ್ರಮಗಳನ್ನು ಕೈಕೊಂಡಿತು.

 ಕಾಂಗ್ರೆಸಿನ ಚುನಾವಣಾ ಘೋಷಣೆಯಲ್ಲಿ ನೀಡಿದ್ದ ವಾಗ್ದಾನಗಳನ್ನು ಪೂರೈಸಲು ಕಾಂಗ್ರೆಸ್ ಸರ್ಕಾರ ಕೈಲಾದಷ್ಟು ಪ್ರಯತ್ನಿಸಿತು. ವರ್ಧಾ ಶಿಕ್ಷಣ ಯೋಜನೆ, ರಾಷ್ಟ್ರೀಯ ಯೋಜನಾ ಸಮಿತಿ ಇವು ಕಾಂಗ್ರೆಸ್ ಸರ್ಕಾರ ದೇಶಕ್ಕೆ ಸಲ್ಲಿಸಿದ ಕಾಣಿಕೆಗಳು. ಇವಲ್ಲದೆ ಅನೇಕ ಆಡಳಿತ ಸುಧಾರಣೆಗಳೂ ಜಾರಿಗೆ ಬಂದುವು. ಪಂಚಾಯಿತಿಗಳು ಪುನರುದ್ಧಾರವಾದುವು. ಗ್ರಾಮಕೈಗಾರಿಕೆಗಳಿಗೆ ಹೆಚ್ಚಿನ ಉತ್ತೇಜನ ಸಿಕ್ಕಿತು. ರೈತರ ಮತ್ತು ಕೂಲಿಕಾರರ ಹಿತ ಸಾಧಿಸಲು ಅನೇಕ ಶಾಸನಗಳು ಸ್ವೀಕೃತವಾದುವು. 

 ಕಾಂಗ್ರೆಸ್ ಸರ್ಕಾರಗಳು ಯಶಸ್ವಿಯಾಗಿ ಆಡಳಿತ ನಡೆಸಿದರೂ ಗವರ್ನರುಗಳಿಂದ ಅಡ್ಡಿ ಅತಂಕಗಳು ಬಾರದೆ ಇರಲಿಲ್ಲ. ಆಳರಸರ ಕೈವಾಡವನ್ನು ಪ್ರತಿಭಟಿಸಿ ಎಷ್ಟೋ ವೇಳೆ ಅಧಿಕಾರಕ್ಕೆ ಶರಣುಹೊಡೆದ ಸನ್ನಿವೇಶಗಳೂ ಬಂದಿದ್ದುವು. ಗವರ್ನರುಗಳಿಗೂ ಮಂತ್ರಿಗಳಿಗೂ ಆಗಾಗ ಘರ್ಷಣೆಗಳಾಗುತ್ತಿದ್ದುವು. ಅಂಥ ಪ್ರಸಂಗಗಳಲ್ಲಿ ಕಾಂಗ್ರೆಸ್ ಸಹನೆಯಿಂದ ವರ್ತಿಸಿದ ಉದಾಹರಣೆಗಳು ಅನೇಕ ಇವೆ. ಕಾಂಗ್ರೆಸು ರಾಜನೀತಿ ನೈಪುಣ್ಯದಿಂದ ವರ್ತಿಸಿ ಪ್ರಜಾಸೇವೆ ಮಾಡಿತು; ಚಿಕ್ಕಪುಟ್ಟ ವಿಷಯಗಳಿಗಾಗಿ ಅಧಿಕಾರತ್ಯಾಗ ಮಾಡದೆ ಬಹು ಜಾಣತನದಿಂದ ವರ್ತಿಸಿತು. ಅತ್ತ ರಾಜ್ಯಯಂತ್ರ ನಿಂತೀತೆಂಬ ಭಯದಿಂದ ಗವರ್ನರ್‍ಗಳೂ ಗವರ್ನರ್-ಜನರಲ್‍ನ ಅನುಮತಿಯಿಲ್ಲದೆ ಮೇಲಿಂದ ಮೇಲೆ ಅಡ್ಡಿಗಳನ್ನು ತಂದೊಡ್ಡುತ್ತಿರಲಿಲ್ಲ. ಆದರೆ ಗವರ್ನರ್-ಜನರಲ್ ಇಚ್ಛಿಸಿದರೆ, ಗವರ್ನರುಗಳು 1935ರ ಕಾಯಿದೆಯ 126ನೆಯ ಕಲಮಿನನ್ವಯ ಮಂತ್ರಿಗಳ ಸಲಹೆಗಳನ್ನು ತಳ್ಳಿಹಾಕುತ್ತಿದ್ದರು. ತತ್ಪರಿಣಾಮವಾಗಿ ಮಂತ್ರಿಮಂಡಲ ನಿರಾಯುಧವಾಗಿ ಕುಳಿತುಕೊಳ್ಳಬೇಕಾಗಿತ್ತು, ಇಲ್ಲವೆ ರಾಜೀನಾಮೆ ಕೊಡಬೇಕಾಗುತ್ತಿತ್ತು. ಬಿಹಾರ, ಸಂಯುಕ್ತ ಪ್ರಾಂತ್ಯಗಳಲ್ಲಿ ಸಣ್ಣಪುಟ್ಟ ಕಾರಣಗಳಿಗಾಗಿ ಗರ್ವನರರು ಮಂತ್ರಿ ಮಂಡಲಗಳೊಡನೆ ಸಹಕರಿಸಲಿಲ್ಲವಾದುದರಿಂದ ಅಲ್ಲಿ ಮಂತ್ರಿಗಳು ರಾಜೀನಾಮೆ ಕೊಟ್ಟು ಹೊರಬಂದರು. ಗವರ್ನರುಗಳ ಹಸ್ತ ಕ್ಷೇಪ ಘಟನಾಸಂಪ್ರದಾಯಕ್ಕೆ ವಿರುದ್ಧವಾಗಿತ್ತು. ಇದೆಲ್ಲವನ್ನೂ ಸಹಿಸಿಕೊಂಡು ಹಲವಾರು ಪ್ರಾಂತ್ಯ ಕಾಂಗ್ರೆಸ್‍ಗಳಲ್ಲಿ ಮಂತ್ರಿಮಂಡಲಗಳು ರಾಜಕೀಯ ಜಾಣ್ಮೆ ಹಾಗೂ ಮುತ್ಸದ್ದಿತನವನ್ನು ವ್ಯಕ್ತಪಡಿಸಿದುವು.

 ಹೋರಾಟದ ಕೊನೆಯ ಘಟ್ಟ: 1939ರಲ್ಲಿ ಬ್ರಿಟಿಷರು ಭಾರತೀಯರೊಂದಿಗೆ ಸಮಾಲೋಚಿಸದೆಯೇ ಭಾರತವನ್ನು ಎರಡನೆಯ ಮಹಾಯುದ್ಧದಲ್ಲಿ ನೂಕಿದರು. ಇದು ಕಾಂಗ್ರೆಸ್ ಧೋರಣೆಗೆ ವಿರೋಧವಾಗಿತ್ತು. ಗುಲಾಮದೇಶವಾಗಿ ಭಾರತ ಬ್ರಿಟಿಷರೊಡನೆ ಯುದ್ಧದಲ್ಲಿ ಸಹಕರಿಸುವುದಿಲ್ಲ ಎಂದು ಕಾಂಗ್ರೆಸ್ ಸಂಸ್ಥೆ ತಿಳಿಸಿತು. ಭಾರತವೂ ಯುದ್ಧದಲ್ಲಿ ಭಾಗವಹಿಸಿ ಫ್ಯಾಸಿಸ್ಟ್ ಶಕ್ತಿಯ ವಿರುದ್ಧ ಹೋರಾಡಬೇಕಾದರೆ ಅದು ಮೊದಲು ಸ್ವತಂತ್ರವಾಗಬೇಕು. ಇದಕ್ಕೆ ಬ್ರಿಟಿಷ್ ಸರ್ಕಾರ ಒಪ್ಪದ್ದಕ್ಕಾಗಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಆಜ್ಞೆಯಂತೆ ಎಲ್ಲ ಕಾಂಗ್ರೆಸ್ ಮಂತ್ರಿ ಮಂಡಲಗಳೂ ಅಧಿಕಾರಕ್ಕೆ ರಾಜೀನಾಮೆಯನ್ನಿತ್ತು ತಮ್ಮ ಅಸಹಕಾರ ಪ್ರದರ್ಶಿಸಿದುವು. ಸ್ವಾತಂತ್ರ್ಯವಿಲ್ಲದೆ ಯುದ್ಧದಲ್ಲಿ ಭಾರತದ ಸಹಕಾರವಿಲ್ಲ ಎಂದು ಕಾಂಗ್ರೆಸ್ ಸಾರಿತು.

 ಆಗ ಭಾರತೀಯರ ಮನವೊಲಿಸುವುದಕ್ಕಾಗಿ 1940ರ ಆಗಸ್ಟ್ 8ರಂದು ತಮ್ಮ ಹೇಳಿಕೆಯೊಂದರಲ್ಲಿ ಆಗಿನ ವೈಸ್‍ರಾಯಿ ಕೆಲವು ಸುಧಾರಣೆಗಳನ್ನು ಪ್ರಕಟಿಸಿದ. ಆದರೆ ಈ ಸುಧಾರಣೆಗಳು ಕಾಂಗ್ರೆಸ್ ಸಂಸ್ಥೆಯ ಹಾಗೂ ಭಾರತೀಯರ ಬಯಕೆಯನ್ನು ಈಡೇರಿಸಲು ಎಳ್ಳಷ್ಟೂ ಸಹಾಯಕವಾಗಿಲ್ಲ. ಆದ್ದರಿಂದ ಕಾಂಗ್ರೆಸ್ ಹಾಗೂ ಸರ್ಕಾರಗಳ ಮಧ್ಯೆ ತೀವ್ರ ಭಿನ್ನಾಭಿಪ್ರಾಯ ಉಂಟಾಗಿ ಕಾಂಗ್ರೆಸ್ ಪುನಃ ಕಾನೂನು ಭಂಗ ಚಳವಳಿ ಪ್ರಾರಂಭಿಸಿತು.

 ಬ್ರಿಟಿಷರು ಬಿತ್ತಿದ ಜಾತಿವಿಷಬೀಜದ ಮೇಲೆ 1940ರಲ್ಲಿ ಮುಸ್ಲಿಂ ಲೀಗ್ ದ್ವಿರಾಷ್ಟ್ರ ಸಿದ್ಧಾಂತ ಬೆಳೆಸಿ ಪ್ರತ್ಯೇಕ ಪಾಕಿಸ್ತಾನದ ಬೇಡಿಕೆಯನ್ನು ಮುಂದಿರಿಸಿತು. ಬರ್ಮದಲ್ಲಿ ಜಪಾನೀ ಆಕ್ರಮಣ ಆರಂಭವಾಯಿತು. ಬ್ರಿಟಿಷರು 1942ರಲ್ಲಿ ಸ್ಟಾಫರ್ಡ್ ಕ್ರಿಪ್ಸನ ನಾಯಕತ್ವದಲ್ಲಿ ಆಯೋಗವೊಂದನ್ನು ಸಂಧಾನಕ್ಕಾಗಿ ಭಾರತಕ್ಕೆ ಕಳುಹಿಸಿದರು. ಕ್ರಿಪ್ಸನ ಸಂಧಾನ ಫಲಕಾರಿಯಾಗಲಿಲ್ಲ. 

(ನೋಡಿ- ಕ್ರಿಪ್ಸ್,-ರಿಚರ್ಡ್-ಸ್ಟ್ಯಾಫರ್ಡ್)

 ಬ್ರಿಟಿಷರು ಭಾರತಕ್ಕೆ ಪೂರ್ಣ ಅಧಿಕಾರ ಕೊಡದಿದ್ದರೆ ಯುದ್ಧದಲ್ಲಿ ಸಹಕಾರವಿಲ್ಲ ಎಂದು ಕಾಂಗ್ರೆಸ್ ಸಾರಿತು. ಇದಾವುದಕ್ಕೂ ಸರ್ಕಾರ ಕಿವಿಗೊಡಲಿಲ್ಲ. ಯುದ್ಧದ ಬಿಸಿ ಭಾರತದ ಬಾಗಿಲಿಗೆ ಬಂತು. ಮುಂದಿನ ಕಾರ್ಯಕ್ರಮ ನಿರ್ಧರಿಸಲು ಆಗಸ್ಟ್ 7 ಮತ್ತು 8 ರಲ್ಲಿ ಬೊಂಬಾಯಿಯಲ್ಲಿ ಕಾಂಗ್ರೆಸ್ ಅಧಿವೇಶನ ಸೇರಿತು. ಬ್ರಿಟಿಷರು ಭಾರತ ಬಿಟ್ಟು ತೊಲಗಬೇಕೆಂಬ ಚರಿತ್ರಾರ್ಹ ಯುದ್ಧ ಘೋಷಣೆಯ ನಿರ್ಣಯ ಸ್ವೀಕರಿಸಿತು. ನಿರ್ಣಯವನ್ನು ಕಾರ್ಯಗತ ಮಾಡುವ ಮುನ್ನ ವೈಸ್‍ರಾಯಿಯನ್ನು ಕಂಡು ಕೊನೆಯ ಸಂಧಾನ ಮಾಡಬೇಕೆಂಬುದು ಗಾಂಧೀಜಿಯ ಇಚ್ಛೆಯಾಗಿತ್ತು. ಆದರೆ ನಿರ್ಣಯದ ಮರುದಿನ ಅರುಣೋದಯದೊಡನೆಯೇ ಕಾಂಗ್ರೆಸಿನ ಎಲ್ಲ ಮುಂದಾಳುಗಳನ್ನೂ ಬಂಧಿಸಲಾಯಿತು. ಕಾಂಗ್ರೆಸ್ ನಾಯಕರ ಮಾರ್ಗದರ್ಶನವಿಲ್ಲದೆ ಜನ ಮುಂಗಾಣದಾದರು. ಆದರೂ ಉಕ್ಕುತ್ತಿದ್ದ ಸ್ವಾತಂತ್ರ್ಯದ ಉತ್ಸಾಹ, ನಾಯಕರನ್ನು ಸೆರೆಹಿಡಿದ ರೋಷ, ದುಡಿ ಇಲ್ಲವೇ ಮಡಿ. ಎಂಬ ಗಾಂಧೀಜಿಯವರ ಸಂದೇಶ, ಇವೆಲ್ಲವೂ ಜನರನ್ನು ಕಾರ್ಯೋನ್ಮುಖರನ್ನಾಗಿ ಮಾಡಿದುವು. ಸರ್ಕಾರವೇ ದುಡುಕಿ ಮಹಾಕ್ರಾಂತಿಗೆ ಸ್ವಾಗತ ಕೊಟ್ಟಂತಾಯಿತು. ಹೀಗೆ ಸೆಪ್ಟೆಂಬರ್ ಕೊನೆಯ ತನಕ ಕಾಂಗ್ರೆಸ್ ಚಳವಳಿ ಬಹಿರಂಗವಾಗಿ ಪ್ರಚಂಡವಾಗಿ ನಡೆಯಿತು. ಅನೇಕ ಕಡೆ ಸರ್ಕಾರಕ್ಕೂ ಜನತೆಗೂ ಘರ್ಷಣೆ ನಡೆದು ರಕ್ತ ಹರಿಯಿತು.

 ಕಾಂಗ್ರೆಸಿನಿಂದ ಹೊರಬಿದ್ದ ಸುಭಾಷ್‍ಚಂದ್ರ ಬೋಸ್ ಜರ್ಮನಿ ಜಪಾನ್‍ಗಳೊಡನೆ ಸಂಬಂಧ ಬೆಳೆಸಿ ಆeóÁದ್ ಹಿಂದ್ ಸೈನ್ಯವನ್ನು ಸಿದ್ಧಪಡಿಸಿ ಬ್ರಿಟಿಷರನ್ನು ಭಾರತದಿಂದ ಹೊರದೂಡಲು ಪ್ರಯತ್ನಿಸಿದರು. ಆದರೆ ಜಪಾನಿನ ಸೋಲಿನೊಂದಿಗೆ ಸುಭಾಷರ ಸೈನ್ಯದ ಶಕ್ತಿಗುಂದಿತು. ಭಾರತೀಯರ ಸ್ವಾತಂತ್ರ್ಯದ ಕೂಗಿನ ಚಳವಳಿಯನ್ನು ಹತ್ತಿಕ್ಕಲು ಸರ್ಕಾರ ಬಹಳ ಪ್ರಯತ್ನಿಸಿತು.

 1944ರಲ್ಲಿ ಗಾಂಧೀಜಿಯವರ ಬಿಡುಗಡೆಯಾದಾಗ ಅವರು ಕಾಂಗ್ರೆಸಿನ ಏಕಮೇವ ಪ್ರತಿನಿಧಿಯಾಗಿ ಮುಸ್ಲಿಂ ಲೀಗ್ ಅಧ್ಯಕ್ಷ ಜಿನ್ನಾನೊಡನೆ ಮಾತುಕತೆ ನಡೆಸಿ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಲು ಪ್ರಯತ್ನಿಸಿದರು. ಆದರೆ ಅದು ವ್ಯರ್ಥವಾಯಿತು. 1945ರಲ್ಲಿ ಬ್ರಿಟನಿನ ಸಾರ್ವತ್ರಿಕ ಚುನಾವಣೆಗಳಲ್ಲಿ ಲೇಬರ್ ಪಕ್ಷ ಬಹುಮತಗಳಸಿ ಸರ್ಕಾರ ರಚಿಸಿತು. ಆ ಸರ್ಕಾರ ಭಾರತದ ಸಮಸ್ಯೆಯನ್ನು ಬಿಡಿಸಲು ಮನಃ ಪೂರ್ವಕವಾಗಿ ಪ್ರಯತ್ನಿಸಿತು.

 ತನ್ನ ಧೋರಣೆಗನುಗುಣವಾಗಿ ಆ ಸರ್ಕಾರ ಮೇ 1946ರಲ್ಲಿ ಸಂಪುಟ ಸದಸ್ಯರ ನಿಯೋಗವೊಂದನ್ನು ಭಾರತಕ್ಕೆ ಕಳಿಸಿತು. ಅವರ ಯೋಜನೆಯ ತಾತ್ಕಾಲಿಕ ಸರ್ಕಾರ ರಚನೆಯ ಸಲಹೆ ಕಾಂಗ್ರೆಸಿಗೆ ಅಸಮ್ಮತವಾಗಿತ್ತು. ಏಕೆಂದರೆ ಹಲವಾರು ಪಕ್ಷಗಳಿಂದ ಕೂಡಿದ ಸಂಮಿಶ್ರ ಸರ್ಕಾರ ಸಾಮೂಹಿಕ ಹೊಣೆಗಾರಿಕೆಯ ಮೇಲೆ ಕೆಲಸ ಮಾಡಲು ಶಕ್ಯವಿರಲಿಲ್ಲ. ಆದ್ದರಿಂದ ಆ ಭಾಗವನ್ನುಳಿದು ಬೇರೆ ಎಲ್ಲ ಶಿಫಾರಸುಗಳನ್ನೂ ಕಾಂಗ್ರೆಸ್ ಒಪ್ಪಿತು. ಆದರೆ ಮುಸ್ಲಿಂ ಲೀಗ್ ಮಾತ್ರ ಮೊದಲು ಒಪ್ಪಿ ಅನಂತರ ಒಪ್ಪಿಗೆಯನ್ನು ಹಿಂತೆಗೆದುಕೊಂಡಿತಲ್ಲದೆ ನೇರ ಕ್ರಮ ಕೈಗೊಳ್ಳಲು ನಿರ್ಣಯ ಸ್ವೀಕರಿಸಿತು. ದ್ವಿರಾಷ್ಟ್ರ ಸೂತ್ರಸಾಧನೆಗಾಗಿ ಮುಸ್ಲಿಂ ಲೀಗ್ ಪ್ರೇರಿತ ಜನರಿಂದ ಕೊಲೆ, ಸುಲಿಗೆ, ದರೋಡೆ ಮುಂತಾದವು ಸಂಭವಿಸಿದವು. ಸರ್ಕಾರ ಯಾರ ರಕ್ಷಣೆಗೂ ಮುಂದೆ ಬರಲಿಲ್ಲ. ಹಿಂದೂಗಳು ಪ್ರತಿಕಾರ ಕ್ರಮ ಕೈಗೊಂಡರು. ಬಂಗಾಳ ಬಿಹಾರ ಪ್ರಾಂತ್ಯಗಳಲ್ಲಿ ಗಲಭೆ ಅಧಿಕ ಪ್ರಮಾಣದಲ್ಲಿ ಸಾಗಿತ್ತು.

 ಪೂರ್ವಯೋಜನೆಯ ಮೇರೆಗೆ ಸಂವಿಧಾನ ಸಭೆಗೆ ಚುನಾವಣೆ ನಡೆದು ಕಾಂಗ್ರೆಸ್ ಸದಸ್ಯರು ಅಧಿಕ ಬಹುಮತದಿಂದ ಆರಿಸಿಬಂದರು. ಆದರೆ ಮುಸ್ಲಿಂ ಲೀಗ್ ಇದನ್ನು ಸೇರಲು ನಿರಾಕರಿಸಿತು. ಆದರೂ ಆಟ್ಲಿ ಸರ್ಕಾರ ಬಹುಮುಖ್ಯವಾದ ಧೋರಣೆಯೊಂದನ್ನು ಘೋಷಿಸಿ ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವ ನಿರ್ಧಾರವನ್ನು ಪ್ರಕಟಪಡಿಸಿತು. ಅಲ್ಲದೆ ಲಾರ್ಡ್ ಮೌಂಟ್‍ಬ್ಯಾಟನನನ್ನು ಅಧಿಕಾರ ಸೂತ್ರದ ವರ್ಗಾವಣೆಗೆ ಸೂಕ್ತ ಏರ್ಪಾಟುಮಾಡಲು ನೇಮಿಸಿತು. ಈ ಧೋರಣೆಯನ್ನು ಹೊರಗೆಡಹಿದ ಕೂಡಲೆ ಮುಸ್ಲಿಂ ಲೀಗ್ ದೇಶದ ತುಂಬೆಲ್ಲ ಪ್ರಚಂಡ ಗಲಭೆಯನ್ನೆಬ್ಬಿಸಿತು. ಮುಂದಾಳುಗಳ ಹತೋಟಿಯಿಲ್ಲದೆ ಈ ಗೊಂದಲದಿಂದ ಭಯಂಕರ ಕಹಿ ಫಲಗಳೇ ಉಂಟಾದುವು. ಇದರಿಂದ ಬೇಸತ್ತ ಸರ್ಕಾರ ಹಾಗೂ ಅನೇಕ ಕಾಂಗ್ರೆಸ್ ಮುಂದಾಳುಗಳು ದೇಶದ ವಿಭಜನೆ ಅನಿವಾರ್ಯವೆಂಬುದನ್ನು ಕಂಡುಕೊಂಡರು. ಕೊನೆಗೆ ಕಾಂಗ್ರೆಸ್ ಮೌಂಟ್ ಬ್ಯಾಟನ್ ಯೋಜನೆಯನ್ನು ಒಪ್ಪಿಕೊಂಡಿತು. ಅದರ ಪ್ರಕಾರ ಅಖಂಡ ಭಾರತದ ವಿಭಜನೆಯೂ ಆಯಿತು. ಇದರಿಂದಾಗಿ ಹಲವಾರು ಕಡೆಗಳಲ್ಲಿ ಅರಾಜಕತೆಯ ಗಾಳಿ ಹಬ್ಬಿತು. ಇಷ್ಟೇ ಅಲ್ಲದೆ ಲಕ್ಷಾಂತರ ಜನ ಸ್ಥಾನ ಪಲ್ಲಟಹೊಂದಿ ಅನೇಕ ಕಷ್ಟನಷ್ಟಗಳಿಗೆ ಗುರಿಯಾದರು. ಅಂತೂ 1947ರ ಆಗಸ್ಟ್ 15ರಂದು ಭಾರತ ಸ್ವತಂತ್ರವಾಯಿತು.

  (ಜಿ.ಎಸ್.ಎಚ್.; ಪಿ.ಕೆ.ಎಸ್.ಆರ್.)

 ಸ್ವಾತಂತ್ರ್ಯ ಪೂರ್ವದಲ್ಲಿ ಒಂದು ರಾಷ್ಟ್ರೀಯ ಹೋರಾಟದ ವೇದಿಕೆಯೆನಿಸಿದ್ದ ಕಾಂಗ್ರೆಸ್ ಸಂಸ್ಥೆ ಸ್ವಾತಂತ್ರ್ಯ ಲಭಿಸಿದ ಅನಂತರ ಒಂದು ರಾಜಕೀಯ ಪಕ್ಷವಾಗಿ ಪರಿವರ್ತನೆಗೊಂಡಿದೆ.

 ಅಂಗರಚನೆ: ಭಾರತ ರಾಷ್ಟ್ರೀಯ ಕಾಂಗ್ರೆಸ್ ಒಂದು ಪ್ರಜಾಸತ್ತಾತ್ಮಕ ಸಂಸ್ಥೆ. ಪಿರಮಿಡಿನಂತೆ ತಳದಿಂದ ಮೇಲುಮುಖವಾಗಿ ಹಂತಹಂತವಾದ್ದು ಇದರ ಅಂಗರಚನೆ. 18 ವರ್ಷ ವಯಸ್ಸಿಗೆ ಕಡಿಮೆಯಿರದ ಯಾವ ಭಾರತೀಯನಾದರೂ ಇದರ ಸದಸ್ಯನಾಗಬಹುದು. ಆತ ಇದರ ಪ್ರ್ರಾಥಮಿಕ ಸದಸ್ಯ. 20ಕ್ಕಿಂತ ಹೆಚ್ಚು ವಯಸ್ಸಿನ ಯಾವ ಸದಸ್ಯನಾದರೂ ಖಾದಿಧಾರಿಯಾಗಿದ್ದು ಇನ್ನು ಕೆಲವು ನಿಬಂಧನೆಗಳನ್ನು ಅನುಸರಿಸುವುದಾದರೆ ಕ್ರಿಯಾತ್ಮಕ ಸದಸ್ಯನಾಗಬಹುದು. ತಳದಲ್ಲಿ ಗ್ರಾಮ ಅಥವಾ ಮೊಹಲ್ಲಾ ಸಮಿತಿಯಿದೆ. ಅದರ ಮೇಲೆ ಜಿಲ್ಲಾ ಕಾಂಗ್ರೆಸ್ ಸಮಿತಿ. ಅನಂತರ ಪ್ರದೇಶ ಸಮಿತಿ. ಪ್ರದೇಶ ಸಮಿತಿಗಳ ಮೇಲಿರುವುದು ಅಖಿಲ ಭಾರತ ಕಾಂಗ್ರೆಸ್ ಸಮಿತಿ. ಅದಕ್ಕೆ ಇಡೀ ದೇಶದ ಪ್ರತಿನಿಧಿಗಳ ಆಯ್ಕೆಯಾಗುತ್ತದೆ. ಕಾಂಗ್ರೆಸ್ ಅಧ್ಯಕ್ಷನ ನೇತೃತ್ವದಲ್ಲಿ ಕಾರ್ಯಪ್ರವೃತ್ತವಾಗುವ ಅತ್ಯುಚ್ಚ ಸಮಿತಿಯೆಂದರೆ ಕಾರ್ಯಕಾರಿ ಸಮಿತಿ. ಮೇಲುನೋಟಕ್ಕೆ ತೀರ ಸಡಿಲವೆನಿಸಿದರೂ ದೇಶಾದ್ಯಂತ ಸುವ್ಯವಸ್ಥೆಗೊಂಡ ಸಂಸ್ಥೆಯಿದು.

 ಸಂಸ್ಥೆಯ ನಾಯಕರಲ್ಲಿ ಉದ್ಭವಿಸಿದ ಭಿನ್ನಾಭಿಪ್ರಾಯಗಳಿಂದಾಗಿ 1967ರಲ್ಲಿ ಕಾಂಗ್ರೆಸ್ ಎರಡಾಯಿತು.

 ಸ್ವಾತಂತ್ರ್ಯ ಬಂದಂದಿನಿಂದೀಚೆಗೆ ಕೇಂದ್ರ ಮತ್ತು ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ.

 1885 ರಿಂದ 1947ರ ವರೆಗೆ ಕಾಂಗ್ರೆಸಿನ ಅಧ್ಯಕ್ಷರ ಪಟ್ಟಿಯನ್ನು ಮುಂದೆ ಕೊಟ್ಟಿದೆ:

 

ವರ್ಷ       ಅಧಿವೇಶನದ ಸ್ಥಳ        ಅಧ್ಯಕ್ಷರು

1885   ಮುಂಬಯಿ  ಡಬ್ಲ್ಯು. ಸಿ. ಬ್ಯಾನರ್ಜಿ

1886   ಕಲ್ಕತ್ತ   ದಾದಾಭಾಯಿ ನವರೋಜಿ

1887   ಮದ್ರಾಸು   ಸೈಯದ್ ಬದ್ರುದ್ದೀನ್ ತೈಯಬ್ಜಿ

1888   ಅಲಹಾಬಾದ್  ಜಾರ್ಜ್ ಯೂಲ್

1889   ಮುಂಬಯಿ   ಸರ್ ವಿಲಿಯಂ ವೆಡ್ಡರ್‍ಬರ್ನ್

1890   ಕಲ್ಕತ್ತ    ಸರ್ ಫಿರೋಜ್‍ಷಾ ಮೆಹ್ತ

1891   ನಾಗಪುರ   ಆನಂದಾಚಾರ್ಲು

1892   ಅಲಹಾಬಾದ್  ಡಬ್ಲ್ಯು. ಸಿ. ಬಾನರ್ಜಿ

1893   ಲಾಹೋರ್  ದಾದಾಭಾಯಿ ನವರೋಜಿ

1894   ಮದ್ರಾಸು   ಎ. ವೆಬ್

1895   ಪುಣೆ   ಸುರೇಂದ್ರನಾಥ ಬ್ಯಾನರ್ಜಿ

1896   ಕಲ್ಕತ್ತ   ಎಂ. ರಹೀಮತ್ ಉಲ್ಲಾ ಸಾಯನಿ

1897   ಅಮ್ರೋಟಿ   ಸಿ. ಶಂಕರನ್ ನಾಯರ್

1898   ಮದ್ರಾಸು   ಆನಂದ ಮೋಹನ ಬೋಸ್

1899   ಲಖನೌ   ರಮೇಶ್‍ಚಂದ್ರ ದತ್

1900   ಲಾಹೋರ್  ಎನ್. ಜಿ. ಚಂದಾವರ್ಕರ್

1901   ಕಲ್ಕತ್ತ    ಇ.ಡಿ. ವಾಚ

1902   ಅಹಮದಾಬಾದ್  ಸುರೇಂದ್ರನಾಥ ಬ್ಯಾನರ್ಜಿ

1903   ಮದ್ರಾಸು   ಲಾಲ್‍ಮೋಹನ್ ಘೋಸ್

1904   ಮುಂಬಯಿ   ಸರ್ ಹೆನ್ರಿ ಕಾಟನ್

1905    ಬನಾರಸ್ (ವಾರಾಣಸಿ) ಜಿ. ಕೆ. ಗೋಖಲೆ

1906   ಕಲ್ಕತ್ತ    ದಾದಾಭಾಯಿ ನವರೋಜಿ

1907   ಸೂರತ್   ರಾಷ್‍ಬಿಹಾರಿ ಘೋಷ್

1908   ಮದ್ರಾಸು   ರಾಷ್‍ಬಿಹಾರಿ ಘೋಷ್

1909   ಲಾಹೋರ್  ಮದನ ಮೋಹನ ಮಾಳವೀಯ

1910   ಅಲಹಾಬಾದ್  ಸರ್ ವಿಲಿಯಂ ವೆಡ್ಡರ್ ಬರ್ನ್

1911   ಕಲ್ಕತ್ತ   ಬಿಷನ್ ನಾರಾಯಣ್ ಧಾರ್

1912   ಪಟ್ನ   ಆರ್. ಎನ್. ಮುಧೋಳ್ಕರ್

1913   ಕರಾಚಿ   ನವಾಚ್ ಸೈಯದ್ ಮಹಮ್ಮದ್

ಬಹಾದುರ್

1914   ಮದ್ರಾಸು   ಭೂಪೇಂದ್ರನಾಥ ಬೋಸ್

1915   ಮುಂಬಯಿ  ಎಸ್. ಪಿ. ಸಿನ್ಹ

1916   ಲಖನೌ   ಎ. ಸಿ. ಮಜುಂದಾರ್

1917   ಕಲ್ಕತ್ತ   ಆನಿ ಬೆಸಂಟ್

1918   ಮುಂಬಯಿ  ಸೈಯದ್ ಹಸನ್ ಇಮಾಂ

(ವಿಶೇಷಾಧಿವೇಶನ)

1918   ದೆಹಲಿ   ಮದನ ಮೋಹನ ಮಾಳವೀಯ

1919   ಅಮೃತಸರ  ಪಂಡಿತ ಮೋತಿಲಾಲ ನೆಹರು

1920   ಕಲ್ಕತ್ತ (ವಿಶೇಷಾಧಿವೇಶನ) ಲಾಲಾ ಲಜಪತರಾಯ್

1920   ನಾಗಪುರ   ಸಿ. ವಿಜಯರಾಘವಾಚಾರಿಯರ್

1921   ಅಹಮದಾಬಾದ್  ಹಕೀಂ ಅಜ್ಮಲ್ ಖಾನ್

1922   ಗಯಾ   ಸಿ. ಆರ್. ದಾಸ್

1923   ಕಾಕಿನಾಡ   ಮೌಲಾನಾ ಮಹಮ್ಮದ್ ಆಲಿ

1923   ದೆಹಲಿ (ವಿಶೇಷಾಧಿವೇಶನ) ಅಬುಲ್ ಕಲಂ ಆeóÁದ್

1924   ಬೆಳಗಾಂವಿ  ಮಹಾತ್ಮ ಗಾಂಧಿ

1925   ಕಾನ್‍ಪುರ  ಸರೋಜಿನಿ ನಾಯಿಡು

1926   ಗೌಹಾತಿ   ಶ್ರೀನಿವಾಸ ಅಯ್ಯಂಗಾರ್

1927   ಮದ್ರಾಸು   ಎಂ. ಎ. ಅನ್ಸಾರಿ

1928   ಕಲ್ಕತ್ತ   ಪಂಡಿತ ಮೋತಿಲಾಲ್ ನೆಹರು

1929   ಲಾಹೋರ್  ಜವಾಹರಲಾಲ್ ನೆಹರು

1930   ಅಧಿವೇಶನ ಜರುಗಲಿಲ್ಲ

1931   ಕರಾಚಿ   ವಲ್ಲಭಭಾಯಿ ಪಟೇಲ್

1932   ದೆಹಲಿ   ಸೇಠ್ ರಣಚೋಢ್ ಲಾಲ್ ದಾಸ್‍ಅಮೃತ್‍ಲಾಲ್

1933   ಕಲ್ಕತ್ತ   ನೆಲ್ಲಿ ಸೇನ್‍ಗುಪ್ತ

1934   ಮುಂಬಯಿ  ರಾಜೇಂದ್ರ ಪ್ರಸಾದ್

1935   ಅಧಿವೇಶನ ಜರುಗಲಿಲ್ಲ

1936   ಲಖನೌ   ಜವಾಹರಲಾಲ್ ನೆಹರು

1937   ಫೈeóï ಪುರ  ಜವಾಹರಲಾಲ್ ನೆಹರು

1938   ಹರಿಪುರ   ಸುಭಾಷ್‍ಚಂದ್ರ ಬೋಸ್

1939   ತ್ರಿಪುರಿ   ಸುಭಾಷ್‍ಚಂದ್ರ ಬೋಸ್

1940   ರಾಂಘರ್  ಮೌಲಾನಾ ಅಬುಲ್ ಕಲಂ ಆeóÁದ್

1941-45  ಅಧಿವೇಶನಗಳು ಜರುಗಲಿಲ್ಲ

1946      ಜವಾಹರಲಾಲ್ ನೆಹರು

1946   ಮೀರತ್   ಜೆ. ಬಿ. ಕೃಪಾಲನಿ

1947       ರಾಜೇಂದ್ರ ಪ್ರಸಾದ್

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ